Wednesday, October 21, 2009

ಕಾಲಾರ್ಣವದಿ ತೇಲುತಿಹ ನೆನಪಿನ ದೋಣಿಗಳು.....

ಅಂದು ಆ ಇಂದುವದನೆಯ ಅಂಬಕಗಳೆನ್ನ
ಮೋಹದಂದುಕದಲ್ಲಿ
ಬಂಧಿಸಿದವು |

'ಅಂಬುರುಹ'ಲೋಚನೆಯ ಜೊತೆಗೂಡಿ ಅಂಬುಧಿಯ

ಕೂಲದಲಿ ತನುಮರೆತು ವಿಹರಿಸಿದೆನು||

ಕಾಲಾರ್ಣವದೊಳುದಿಪ ವಿಪುಲ ಲಹರಿಗಳಲ್ಲಿ
ನೆನಹು 'ಅಂಬಿ'ಗಳನ್ನು ತೇಲಿಸಿದಳು |
ಆ ತೋಯಧಿಯಲಿ ಬಹ ಊರ್ಮಿಗಳ ಹೊಡೆತದಿಂ
ಹಾಯಿಗಳ ರಕ್ಷಿಸುತ ಸಾಗಿಸಿದಳು ||

ಕೌಮುದಿಯಲಭ್ಯಂಗ ಮಾಡಿದಂದದ ಬೆಡಗಿ
ಮನ್ಮಥನ ಸುಮಬಾಣ ನಾಟಿಸಿದಳು |
ಬಾಳ ಅಗ್ಗಡಲಿನೊಳು ಮುಳುಮುಳುಗುತಿದ್ದೆನ್ನ
ದೋಣಿಯನು ದಡಕೆ ತಾ ಸೇರಿಸಿದಳು.. ||

ಆ ವಿಧಿಯು ಮತ್ಸರದಿ ಚಂಡಮಾರುತ ಬರಿಸೆ
ಮೇರೆದಪ್ಪಿತು ಅಭ್ಧಿ ಘೂರ್ಣಿಸುತಲಿ |
ಅಂಗನೆಯ ಆಲಿಂಗನದೊಳಂಗ ಮರೆತಿರಲು
ಆ ಭೃಂಗ ಸಂಗಮವ ಭಂಗಗೊಳಿಸಿ ||

ಕಾಲಕೂಪಾರದಲಿ ನಾವೀರ್ವರೊಡಗೂಡಿ
ಸಾಗಿದಾಕ್ಷಣಗಳನು ಮರೆಯಲಹೆ ನಾ |
ಎನ್ನ ಮನವಾರಿಧಿಯ 'ಇನ'ನ ದೀಧಿತಿ ಅವಳು
'ಅಂಬಿಗ'ಳ ಕಾಣದಲೆ ಅರಸುತಿಹೆನು..||

ಸ್ನಿಗ್ಧಹಸ್ತಗಳಲ್ಲಿ ಆಕೆ ನಡೆಸಿದ ದೋಣಿ
ಎನ್ನ ಮನಪಟಲದಲಿ ಚಿರವು ಧ್ರುವದಿ |
ಪ್ರತಿಸಂಧ್ಯೆಯೂ ಮನದ ಕಡಲ ಅಲೆಗಳು ಎನ್ನ
ಪ್ರೇಮಿಕೆಯ ಬರುವಿಕೆಗೆ ಕಾಯುತಿಹವು..||